Friday 9 September 2011

ಸ್ನೇಹ ಮಧುರಾಕ್ಷರ...ಸ್ನೇಹ ಅಜರಾಮರ!

ಸ್ನೇಹ ಮಧುರಾಕ್ಷರ...ಸ್ನೇಹ ಅಜರಾಮರ!

The excellent person is related to his friend in the same way as he is related to himself, since a friend is another self
Aristotle

ಜಗತ್ತಿನಲ್ಲಿ ಸಮಾನತೆ ಎನ್ನುವುದು ಎಲ್ಲಾದರೂ ಇದ್ದರೆ ಅದು ಇಬ್ಬರು ಗೆಳೆಯರ ನಡುವೆ ಮಾತ್ರ ಎಂದಳು ಗೆಳತಿ.
ಅದು ಹೇಗೆ, ಎಂದೆ.
ಹೂಂ...ಯಾವುದೇ ಮಾನವ ಸಂಬಂಧಗಳನ್ನು ನೋಡು. ಅಲ್ಲಿ ಮೇಲು-ಕೀಳಿನ ಭಾವನೆ ಕಿಂಚಿತ್ತಾದಾರೂ ಇರುತ್ತೆ. ಗೆಳೆಯರ ನಡುವೆ ಮಾತ್ರ ಯಾವುದೇ ಭೇದ ಭಾವ ಇರಲ್ಲ. ದೇಹವೆರಡು-ಆತ್ಮ ಒಂದೆ! ಎಲ್ಲ ವಿಷಯಗಳಲ್ಲೂ ಅವರು ಸರಿಸಮಾನರು!’ ಎಂದಳು.
ನಿಧಾನವಾಗಿ ನಾನು ಆಲೋಚನೆ ಮಾಡಿದೆ. ನನ್ನ ಗೆಳತಿಯ ಮಾತು ನಿಜವೆನಿಸಿತು. ಮಾನವ ಸಂಬಂಧಗಳಲ್ಲಿ ಗೆಳೆತನಕ್ಕೆ ಮಿಗಿಲಾದ ಸಂಬಂಧ ಮತ್ತೊಂದು ಇಲ್ಲ. ಅದಕ್ಕೆ ವಿವಾಹದ ಸಪ್ತಪದಿಯಲ್ಲಿಏಳನೆಯ ಹೆಜ್ಜೆಯನ್ನಿಡುತ್ತಾ ಗೆಳತಿಯಾಗಿ ನನ್ನ ಬಾಳನ್ನು ಪ್ರವೇಶಿಸು’ (ಸಖಾ ಸಪ್ತಪದಿ ಭವ)  ಎಂದು ಗಂಡು ಹೆಣ್ಣನ್ನು ಪ್ರಾರ್ಥಿಸುತ್ತಾನೆ. ಆದರೆ ಬಹುಪಾಲು ಗಂಡಸರು-ಹೆಂಗಸರು ಮಂತ್ರದ ಅರ್ಥವನ್ನು ತಿಳಿಯದೇ, ಸುಮ್ಮನೇ ಪುರೋಹಿತರು ಹೇಳಿದಷ್ಟು ಮಾಡಿ ಮುಗಿಸುತ್ತಾರೆ. ಹಾಗಾಗಿ ಬಹಳಷ್ಟು ವಿವಾಹಗಳಲ್ಲಿ ಗಂಡು-ಹೆಣ್ಣುಗಳ ನಡುವೆ ಸಮಾನತೆಯಿರುವುದಿಲ್ಲ. ಗಂಡನಾದವನು ತನ್ನ ಹೆಂಡತಿಗೆ ಸರಿಸಮಾನ ಸ್ಥಾನ ನೀಡಿದ್ದೇನೆ ಎನ್ನುವ ಪರಿಕಲ್ಪನೆಯನ್ನಾಗಲಿ ಅಥವ ಹೆಂಡತಿಗೆ ಅಗ್ನಿಸಾಕ್ಷಿಯಾಗಿ, ಇಡೀ ಸಮಾಜದ ಎದುರು ಗಂಡನೆನಿಸಿಕೊಂಡವನು ನನ್ನ ಗೆಳೆತಿಯಾಗಿ ಬಾಎಂದು ಆಹ್ವಾನವನ್ನು ನೀಡಿದ್ದಾನೆ, ಅದನ್ನು ತಾನು ಒಪ್ಪಿಕೊಂಡಿದ್ದೇನೆ. ತಾನು ಗೆಳತಿಯ ಅವನ ಹಾಗೆ ನಡೆದುಕೊಳ್ಳಬೇಕು ಎಂಬ ಪರಿವೆಯನ್ನಾಗಲಿ ಪಡೆದಿರುವುದಿಲ್ಲ. ಹಾಗಾಗಿ ಗಂಡ-ಹೆಂಡತಿಯರು ಗೆಳೆಯ-ಗೆಳತಿಯರ ಹಾಗೆ ಇರದೇ, ನಾನು ಮೇಲು-ನೀನು ಕೀಳಎಂದು ಬೀದಿ ನಾಯಿಗಳಂತೆ ಕಚ್ಚಾಡುವಂತಾಗಿರುತ್ತದೆ. ಇಂತಹ ಅನೇಕ ಸಂಸಾರಗಳನ್ನು ಕಂಡಿರುವ ನಾನು ವಿವಾಹವನ್ನು ಗೆಳೆತನದ ಪಾವಿತ್ರ್ಯಕ್ಕೇರಿಸಿದ ನಮ್ಮ ಹಿರಿಯರನ್ನು ಮನಸ್ಸಿನಲ್ಲಿಯೇ ವಂದಿಸಿದೆ.
ಗೆಳೆತನ:
ಮನುಷ್ಯನು ಸಂಘಜೀವಿ. ಜೀವಜಗತ್ತಿನ ಇತರ ಯಾವುದೇ ಜೀವರಾಶಿಯಲ್ಲಿ ಕಂಡುಬರದಂತಹ ಗೆಳೆತನಮನುಷ್ಯರಲ್ಲಿ ಕಂಡುಬರುತ್ತದೆ. ಪ್ರತಿಯೊಬ್ಬ ಮನುಷ್ಯನು ತನ್ನ ಹೆತ್ತವರು, ತನ್ನ ಸಂಗಾತಿ ಹಾಗೂ ತನ್ನ ಮಕ್ಕಳಿಗೆ ಆದ್ಯತೆಯನ್ನು ಕೊಡುತ್ತಾನೆ. ಆನಂತರ ಇತರರು. ಇತರರ ಪಟ್ಟಿಯಲ್ಲಿ ಗೆಳೆಯರು ಸ್ಥಾನವನ್ನು ಪಡೆಯುತ್ತಾರೆ. ಅಪರೂಪಕ್ಕೆ ಗೆಳೆಯರೂ ಸಹಾ ಮನೆಮಂದಿಯಲ್ಲಿ ಒಬ್ಬರಾಗಿ ಇರುವುದುಂಟು. ಏಕೆಂದರೆ ಗೆಳೆಯ ಎನ್ನುವನು ತನ್ನ ಪ್ರತಿರೂಪ. ತನ್ನ ವ್ಯಕ್ತಿತ್ವದ  ಹೊರಪ್ರತಿನಿಧಿ!
ಭರ್ತೃಹರಿಯು ತನ್ನ ನೀತಿಶತಕದಲ್ಲಿ ಹೇಳುವ ಹಾಗೆಗೆಳೆಯನು ಯಾವುದೇ ಪಾಪಗಳನ್ನು ಮಾಡಲು ಬಿಡುವುದಿಲ್ಲ. ಸನ್ಮಾರ್ಗದಲ್ಲಿ ಕರೆದುಕೊಂಡು ಹೋಗುತ್ತಾನೆ. ಸಮಾಜದಲ್ಲಿ ಗೆಳೆಯನ ಒಳ್ಳೆಯ ಗುಣಗಳನ್ನು ಎಲ್ಲರ ಎದುರು ಎತ್ತಿ ತೋರುತ್ತಾನೆ. ದುರ್ಗುಣಗಳೇನಾದರೂ ಇದ್ದಲಿ ಅವನ್ನು ಯಾರಿಗೂ ಕಾಣದಂತೆ ಮುಚ್ಚಿಡುತ್ತಾನೆ. ಆಪತ್ಕಾಲ ಬಂದಾಗ ಹೆಗಲಿಗೆ ಹೆಗಲು ಕೊಟ್ಟು ಅಗತ್ಯ ನೆರವನ್ನು ನೀಡಿ ಜೊತೆಯಲ್ಲಿ  ನಿಲ್ಲುತ್ತಾನೆ. ಮೋಸ ಮಾಡಿ ಓಡಿ ಹೋಗುವುದಿಲ್ಲ.”
ಗೆಳೆಯರು
ಗೆಳೆತನ ಸರ್ವಶ್ರೇಷ್ಠವಾದದ್ದು. ಆದರೆ ಎಲ್ಲ ಗೆಳೆಯರು ಸರ್ವಶ್ರೇಷ್ಥವಾಗುವುದಿಲ್ಲ. ಮಹಾಭಾರತದಲ್ಲಿ ಕೃಷ್ಣ-ಸುಧಾಮರಂತಹ ಗೆಳೆಯರ ಉದಾಹರಣೆ ದೊರೆಯುತ್ತದೆ. ಹಾಗೆಯೇ ದ್ರೋಣ-ದ್ರುಪದರಂತಹ ಗೆಳೆಯರ ಉದಾಹರಣೆಯೂ ದೊರೆಯುತ್ತದೆ. ಶ್ರೀಮಂತಿಕೆಯ ವೈಭವದಲ್ಲಿ ಮೆರೆಯುವ ಕೃಷ್ಣ, ತನ್ನ ಸಹಪಾಠಿ ಸುಧಾಮನನ್ನು ಮರೆಯುವುದಿಲ್ಲ. ಅವನನ್ನು ಆದರಿಸುತ್ತಾನೆ. ಹಾಗೆಯೇ ಸುಧಾಮನು ಬಾಯಿಬಿಟ್ಟು ತನ್ನ ಬಡತನವನ್ನು ನಿವಾರಿಸು ಎಂದು ಕೇಳದಿದ್ದರೂ ಸಹಾ ಅವನ ದಾರಿದ್ರ್ಯವನ್ನು ನೀಗುತ್ತಾನೆ. ದ್ರುಪದ ರಾಜಕುಮಾರ. ದ್ರೋಣ ಬಡ ಬ್ರಾಹ್ಮಣ. ಆದರೆ ಇಬ್ಬರೂ ಒಂದೇ ಗುರುವಿನ ಬಳಿ ಪಾಠ ಕಲಿಯುತ್ತಿರುತ್ತಾರೆ. ಆಗ ದ್ರುಪದನು ತಾನು ರಾಜನಾದ ಮೇಲೆ ದ್ರೋಣನಿಗೆ ಸಹಾಯ ಮಾಡುವುದಾಗ ಮಾತು ಕೊಡುತ್ತಾನೆ. ಆದರೆ ರಾಜನಾದ ಮೇಲೆ ತನ್ನ ಬಳಿ ಬಂದ ದ್ರೋಣನ ಗುರುತೇ ಹಿಡಿಯುವುದಿಲ್ಲ. ದ್ರುಪದನ ಅಹಂಕಾರ ಅವನ ಸಾವಿಗೆ ಕಾರಣವಾಗುತ್ತದೆ. ಅದರ ವಿವರ ಇಲ್ಲಿ ಅಪ್ರಸ್ತುತ.
ಹಿನ್ನೆಲೆ:
ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯು ಏಪ್ರಿಲ್ ೨೭, ೨೦೧೧ ನೆಯ ದಿನದಂದು, ಜುಲೈ ೩೦ ನೆಯ ದಿನಾಂಕವನ್ನು ಅಂತಾರಾಷ್ಟ್ರೀಯ ಮೈತ್ರಿ ದಿನವನ್ನಾಗಿ (ಇಂಟರ್ನ್ಯಾಶನಲ್ ಫ್ರೆಂಡ್ಷಿಪ್ ಡೇ) ಆಚರಿಸಬೇಕು ಎಂದು ಕರೆ ನೀಡಿತು. ೧೯೫೮ ರಲ್ಲಿ, ಪ್ರತಿ ವರ್ಷ ಜುಲೈ ೩೦ ರಂದು ವಿಶ್ವ ಮೈತ್ರಿ ದಿನಾಚರಣೆಯನ್ನು ಆಚರಿಸಬೇಕೆಂದು ನಿರ್ಣಯಿಸಿದರು. ಆದರೆ ಸಂಪ್ರದಾಯನುಸಾರ ಪ್ರತಿವರ್ಷ ಆಗಸ್ಟ್ ತಿಂಗಳ ಮೊದಲನೆಯ ಭಾನುವಾರ ಮೈತ್ರಿ ದಿನಾಚರಣೆಯನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಅದರಂತೆ ಆಗಸ್ಟ್ ರಂದು ಮೈತ್ರಿ ದಿನಾಚರಣೆಯು ನಡೆಯುತ್ತಿದೆ.
ಅಂತಾರಾಷ್ಟೀಯ ಮೈತ್ರಿ ದಿನಾಚರಣೆಯು ಪರಿಪೂರ್ಣವಾಗಿ ಸ್ನೇಹದ ಮಹತ್ವ ಅಥವ ಪಾವಿತ್ರ್ಯದ ಕಾರಣ ಜನ್ಮ ತಳೆಯಲಿಲ್ಲ. ಇದರಲ್ಲಿ ದೊಡ್ಡ ವ್ಯಾಪಾರೀ ಉದ್ದೇಶವಿತ್ತು. ಬಿಲಿಯ ಡಾಲರುಗಳ ದೊಡ್ಡ ವ್ಯವಹಾರವೇ ಇತ್ತು. ಜೋಯ್ಸಿ ಹಾಲ್ ಎಂಬ ಅಮೆರಿಕನ್ ವ್ಯಕ್ತಿಯು ೧೯೧೯ ರಲ್ಲಿ ಮೈತ್ರಿ ದಿನಾಚರಣೆಯ ಕನಸನ್ನು ಕಂಡನು. ಇವರ್ನುಹಾಲ್ ಮಾರ್ಕ್ಎಂಬ ಗ್ರೀಟಿಂಗ್ ಕಾರ್ಡ್-ಗಳನ್ನು ತಯಾರಿಸುತ್ತಿದ್ದನು. ಹಾಗಾಗಿ ಮೈತ್ರಿ ದಿನದಂದು ಗೆಳೆಯರು ಶುಭಾಶಯ ಪತ್ರಗಳ ಮೂಲಕ ಒಬ್ಬರನ್ನೊಬ್ಬರು ಅಭಿನಂದಿಸಬಹುದು ಎಂಬ ಕನಸನ್ನು ಕಂಡನು. ಅವನ ಸಾಹಸವನ್ನು ಹಲವರು ಪುರಸ್ಕರಿಸಿದರಾದರೂ ಸಹಾ, ಅದರ ಹಿಂದಿರುವ ವ್ಯಾಪಾರೀ ಉದ್ದೇಶವನ್ನು ಮನಗಂಡು ಪ್ರತಿಭಟಿಸಿದರು. ಹಾಗಾಗಿ ಆರಂಭದಲ್ಲಿ ಸೋಡಬಾಟಲಿಯಂತೆ ಭರ್ಜರಿ ಸದ್ದನ್ನು ಮಾಡಿದ ಮೈತ್ರಿ ದಿನಾಚರಣೆಯು ಅಮೆರಿಕದಲ್ಲಿ ತಣ್ಣಗಾಗಲಾರಂಭಿಸಿತು. ಯೂರೋಪಿನವರು ಮೈತ್ರಿ ದಿನಾಚರಣೆಯನ್ನು ಆಚರಿಸಲು ಅಂತಹ ಉತ್ಸಾಹವನ್ನೇನು ತೋರಲಿಲ್ಲ. ಆದರೆ ದಕ್ಷಿಣ ಅಮೆರಿಕದ ಹಲವು ದೇಶಗಳು, ಮುಖ್ಯವಾಗಿ ಪರಾಗ್ವೆಯು ಮೈತ್ರಿ ದಿನಾಚರಣೆಯ ಬಗ್ಗೆ ಒಲವನ್ನು ತೋರಿ, ಮುಂದುವರೆಸಿಕೊಂಡು ಬಂದವು.
೧೯೯೮. ವಿಶ್ವ ಸಂಸ್ಥೆಯ ಮಹಾ ಕಾರ್ಯದರ್ಶಿಗಳಾಗಿದ್ದಕೋಫಿ ಅನ್ನನ” ಅವರ ಮಡದಿನಾನೇ ಅನ್ನನ್” ಅವರು ಅಂತಾರಾಷ್ಟ್ರೀಯ ಮೈತ್ರಿ ದಿನಾಚರಣೆಗೆ ಪುನರುಜ್ಜೀವನ ನೀಡಲು ಮನಸ್ಸು ಮಾಡಿದರು.”ವಿನ್ನಿ ದಿ ಪೂಹ್” ಎಂಬ ಜನಪ್ರಿಯ ಕರಡಿಯ ಪಾತ್ರವನ್ನು ಸ್ನೇಹದ ಮಹತ್ವವನ್ನು ಸಾರಲು ಪ್ರಚಾರಕ್ಕಾಗಿ ಬಳಸಿಕೊಂಡರು.  ವಿಶ್ವ ಸಂಸ್ಥೆಯ  ಸಾರ್ವಜನಿಕ ಮಾಹಿತಿ ವಿಭಾಗವು (ಡಿಪಾರ್ಟ್ಮೆಂಟ್ ಆಫ್ ಪಬ್ಲಿಕ್ ಇನ್ಫರ್ಮೇಶನ್) ಹಾಗೂ ವಾಲ್ಟ್ ಡಿಸ್ನಿಯವರು ಅಭಿಯಾನದಲ್ಲಿ ಜೊತೆ ನೀಡಿದರು. ಇವರ ಜೊತೆಕ್ಯಾಥಿ ಲೀ ಗಿಫ್ಫರ್ಡಎಂಬ ಅಮೆರಿಕದ ಟೆಲಿವಿಷನ್ ತಾರೆ, ಕವಯತ್ರಿ, ಹಾಡುಗಾರ್ತಿಯು ಟೆಲಿವಿಷನ್ ಹಾಗೂ ಇತರ ಮಾಧ್ಯಮಗಳಲ್ಲಿ ಜನಪ್ರಿಯಗೊಳಿಸಿದಳು.
ಮೈತ್ರಿ ದಿನಾಚರಣೆಗೆ ಭಾರತದಲ್ಲಿ ಬಹುದೊಡ್ಡ ಬೆಂಬಲ ದೊರೆಯಿತು. ಈ ವೇಳೆಗಾಗಲೇಫ್ರೆಂಡ್ ಶಿಪ್ ಬ್ಯಾಂಡ್ಗಳು ಭಾರತ, ಬಾಂಗ್ಲಾದೇಶ್, ನೇಪಾಳ ಹಾಗೂ ದಕ್ಷಿಣ ಅಮೆರಿಕದ ದೇಶಗಳಲ್ಲಿ ಜನಪ್ರಿಯವಾಗಿದ್ದವು. ಹಾಗಾಗಿ ನಾನೇ ಅನ್ನನ್ ಅವರ ಪ್ರಯತ್ನಕ್ಕೆ ಶೀಘ್ರ ಫಲದೊರೆಯಿತು.
ನಾನೇ ಅನ್ನನ್ ಅವರಿಗೆ ದೊರೆತ ಈ ಶೀಘ್ರ ಫಲದ ಹಿನ್ನೆಯಲ್ಲಿ ಆಧುನಿಕ ವಿಜ್ಞಾನದ ಕೊಡುಗೆ ಮಹತ್ತರವಾಗಿತ್ತು. ಈಗ ಮೊಬೈಲಿನ ಮೂಲಕ, ಅಲ್ಪ ಬೆಲೆಯಲ್ಲಿ ಜಗತ್ತಿನಲ್ಲಿರುವ ಯಾರನ್ನು ಬೇಕಾದರೂ ಸುಲುಭವಾಗಿ ಸಂಪರ್ಕಿಸಬಹುದು. “ಹ್ರಸ್ವ ಸಂದೇಶ ಸೇವೆ” (ಶಾರ್ಟ್ ಮೆಸೇಜ್ ಸರ್ವೀಸ್-ಎಸ್.ಎಂ.ಎಸ್) ಮೈತ್ರಿ ದಿನಾಚರಣೆಗೆ ನೆರವಾಯಿತು. ಅಂತರ್ಜಾಲದಲ್ಲಿ ದೊರೆಯುತ್ತಿರುವ ಫೇಸ್ ಬುಕ್, ಟ್ವಿಟ್ಟರ್ ಮುಂತಾದ ಸಮುದಾಯ ಗುಂಪುಗಳು ಮೈತ್ರಿ ದಿನವನ್ನು ತ್ವರಿತವಾಗಿ ಜನಪ್ರಿಯಗೊಳಿಸಿಬಿಟ್ಟಿತು. ಅಂತಾರಾಷ್ಟ್ರೀಯ ಮೈತ್ರಿ ದಿನದಂದು ಗ್ರೀಟಿಂಗ್ ಕಾರ್ಡುಗಳ ವಿನಿಮಯ ಪ್ರಮಾಣ ಸಂಖ್ಯಾ ದೃಷ್ಟಿಯಿಂದ ಸೀಮಿತ. ಆದರೆ ಮೊಬೈಲ್ ಸೇವೆಯನ್ನು ನೀಡುವ ಸಂಸ್ಥೆಗಳು ದೊಡ್ಡ ಪ್ರಮಾಣದ ಹಣವನ್ನು ಮಾಡುತ್ತಿರುವುದು ಸುಳ್ಳಲ್ಲ. ಹಾಗೆಯೇ ಮೈತ್ರಿ ದಿನದಂದು ಸಣ್ಣ-ಪುಟ್ಟ ಉಡುಗೊರೆ ವಸ್ತುಗಳ ವಿನಿಮಯ ನಡೆಯುವ ಪದ್ಧತಿ ಜನಪ್ರಿಯವಾಗಿದೆ. ಹುಡುಗ-ಹುಡುಗಿಯರು ಪ್ರೇಮಲೋಕದ ಭ್ರಮೆಯಲ್ಲಿ ತೇಲುತ್ತಿದ್ದರೆ ಉಡುಗೊರ್ಯ ವಸ್ತುಗಳು ವಜ್ರದ ಉಂಗುರದವರೆಗೂ ಹೋಗುತ್ತವೆ. ಇಂದು ಮೈತ್ರಿ ದಿನದ ಹಿಂದೆ ದೊಡ್ಡ ವ್ಯಾಪಾರೀ ಮನೋಭಾವವೇ ಎದ್ದು ಕಾಣುತ್ತಿರುವುದು ನಿಜವಾದರೂ ಸಹಾ, ಮೈತ್ರಿ ದಿನದ ನೆಪದಲ್ಲಿ ಅಸಂಖ್ಯ ಜನರು ಒಬ್ಬರನ್ನೊಬ್ಬರು ಸ್ಮರಿಸಿಕೊಳ್ಳುವುದು, ಸಂಪರ್ಕಿಸುವುದು ಹಾಗೂ ಅಭಿನಂದಿಸುತ್ತಿರುವುದೂ ಅಷ್ಟೇ ನಿಜವಾಗಿದೆ. ಅಂತಾರಾಷ್ಟ್ರ್ರೀಯ ಭ್ರಾತೃತ್ವವನ್ನು ಬೆಲೆಸಬೇಕೆಂಬ ನಾನೇ ಅನ್ನನ್ ಅವರ ಪ್ರಯತ್ನ ಭಾಗಶಃ ಫಲ ಕೊಟ್ಟಿದೆಯೆನ್ನಬಹುದು.
ಗೆಳೆಯ-ಗೆಳತಿಯರು:
ಮೈತ್ರಿ ದಿನದಂದು ನನ್ನ ಬದುಕಿನಲ್ಲಿ ಬಂದು ಹೋದ, ಬಂದು ಉಳಿದಿರುವ ಗೆಳೆಯರ ನೆನಪು-ಸವಿ ಸವಿ ನೆನಪು-ಕಹಿ ಕಹಿ ನೆನಪು ಸಾಲು ಸಾಲುಗಳಾಗಿ ಬರುತ್ತಿವೆ. ನನ್ನ ಶಾಲಾ ದಿನದ ಸಹಪಾಠಿಗಳು! ಅವರಲ್ಲಿ ಕೆಲವರು ನನ್ನೊಡನೆಯೇ ಕೆಲವು ಗೆಳೆಯ ಗೆಳತಿಯರು ಮಾಧ್ಯಮಿಕ, ಪ್ರೌಢ, ಪದವಿ, ಸ್ನಾತಕೋತ್ತರ ಪದವಿಯಾದ್ಯಂತ ಜೊತೆಯಲ್ಲಿಯೇ ಬಂದರು. ಆದರೆ ನಡುವೆ ಅನೇಕರು, ರೈಲಿನಲ್ಲಿ ಪಯಣಿಸುವವರು ತಮ್ಮ ತಮ್ಮ ನಿಲ್ದಾಣಗಳು ಬಂದಾಗ ಇಳಿದು ಹೋಗುವಂತೆ, ನಡು ನಡುವೆ ನಮ್ಮಿಂದ ಬೇರೆಯಾದರು. ಆದರೆ ಅಲ್ಲಿಯವರೆಗೆ ಅವರು ನಮ್ಮೊಡನೆ ಇದ್ದದ್ದು ಸುಳ್ಳಲ್ಲ. ನೋವು-ನಲಿವುಗಳನ್ನು ನೀಡಿದ್ದು ಸುಳ್ಳಲ್ಲ. ಸಿಹಿ-ಕಹಿ ನೆನಪುಗಳನ್ನು ಉಳಿಸಿರುವುದು ಸುಳ್ಳಲ್ಲ.
ನಮ್ಮ ಈಮೈತ್ರಿ ಎಕ್ಸ್ಪ್ರೆಸ್ರೈಲು ನಡು ನಡುವೆ ನಿಲ್ದಾಣದಲ್ಲಿ ನಿಂತಾಗ, ರೈಲಿನೊಳಗೆ ಹತ್ತಿ ಬಂದ ಹೊಸಬರಿಗೇನು ಕಡಿಮೆಯಿಲ್ಲ. ಹೊಸ ಗೆಳೆತನ ಹೊಸ ಹೊಸ ನಲಿವನ್ನು ಅನುಭವವನ್ನು ತಂದದ್ದೂ ಸುಳ್ಳಲ್ಲ. ಶಾಲಾ ದಿನಗಳಿಗಿಂತ ಕಾಲೇಜು ದಿನಗಳಲ್ಲಿ ದೊರೆಯುವ ಗೆಳೆಯರ ಗಮ್ಮತ್ತೇ ಬೇರೆ! ಕಾಲೇಜು ತುಳಿದ ಪ್ರತಿಯೊಬ್ಬರಿಗೂ ನನ್ನ ಮಾತು ಚೆನ್ನಾಗಿ ತಿಳಿಯುತ್ತದೆ.
ಗಂಡು-ಹೆಣ್ಣುಗಳ ನಡುವೆ ಸ್ನೇಹಕ್ಕೆ ಸಂಕೋಚವಿದ್ದ ಕಾಲ ಒಂದಿತ್ತು. ನಮ್ಮ ಸಮಾಜವು ಗಂಡು-ಹೆಣ್ಣನ್ನು ಎಂದೂ ಮುಕ್ತವಾಗಿ ನೋಡಿಯೇ ಇಲ್ಲ. ಅಣ್ಣ-ತಂಗಿಯರು ಒಟ್ಟಿಗೆ ರಸ್ತೆಯಲ್ಲಿ ನಡೆಯಲು ಕಷ್ಟವಿದ್ದ ದಿನಗಳು ನಾವು ವಾಸಿಸುವೇ ಇದೇ ಸಮಾಜದಲ್ಲಿತ್ತು. ಆದರೆ ಇಂದು ಪಾಶ್ಚಾತ್ಯೀಕರಣ, ವೈಜ್ಞಾನೀಕರಣ, ನಗರೀಕರಣ, ಸಮ ಶಿಕ್ಷಣಾವಕಾಶದ ಕಾರಣ ಹುಡುಗ-ಹುಡುಗಿಯರು ಕಲೆತು ಮಾತನಾಡುವುದಕ್ಕೆ ಹಿಂದೆ ಇದ್ದಂತಹ ಅಡ್ಡಿ-ಆತಂಕ ಇಂದಿಲ್ಲ. ನಮ್ಮ ಅಮ್ಮ-ಅಪ್ಪಂದಿರು, ಒಬ್ಬರನ್ನೊಬ್ಬರು ಸಂಪರ್ಕಿಸಬೇಕಾದರೆಅಂಚೆಯ ಅಣ್ಣ ನೆರವಿಗೆ ಕಾಯಬೇಕಾಗಿತ್ತು. ಆದರೆ ಇಂದು ನಮ್ಮ ಹುಡುಗರ ಬೆರಳ ತುದಿಯಲ್ಲಿ ಇಡೀ ಜಗತ್ತು ಕೈ ಮುಗಿದು ನಿಂತಿದೆ. ಕ್ಷಣಾರ್ಧದಲ್ಲಿ ಜಗತ್ತಿನ ಯಾವುದೇ ಮೂಲೆಯಲ್ಲಿರುವ ಗೆಳೆಯ-ಗೆಳತಿಯೊಡನೆ ಮಾತನಾಡಬಹುದು. ಮಾಹಿತಿಯನ್ನು ಕಳಿಸಬಹುದು. ತರಿಸಿಕೊಳ್ಳಬಹುದು. ಅಂತರ್ಜಾಲದ ಕ್ಯಾಮರ ಮೂಲಕ ಒಬ್ಬರನ್ನೊಬ್ಬರು ನೋಡುತ್ತ ಮಾತುಕತೆ ನಡೆಸಬಹುದು. ಪಿಕ್ಚರ್ ಫೋನುಗಳು ಮಾತ್ರ ಭಾರತಕ್ಕೆ ಪೂರ್ಣ ಪ್ರಮಾಣದಲ್ಲಿ ಇನ್ನೂ ಬರಬೇಕಿದೆ. ಇಂದು ಜಗತ್ತು ನಮ್ಮ ಅಂಗೈಯಲ್ಲಿದೆ. ಹಾಗಾಗಿ ಇಂದು ಗೆಳೆಯರ ನಡುವೆ ಮಾಹಿತಿ ಸಂವಹನ ಮಿಂಚಿನ ವೇಗದಲ್ಲಿ ನಡೆಯುತ್ತಿದೆ.
            ಇಂದಿನ ಕಾಲೇಜುಗಳಲ್ಲಿ ಗಂಡು-ಹೆಣ್ಣುಗಳ ನಡುವೆ ಮುಕ್ತ ಸಂವಹನ ಇರುವ ಕಾರಣ, ಸಂವಹನ ಹರಯದ ಹಸಿ-ಬಿಸಿಗಳನ್ನು ಕೆರಳಿಸಲು ಪೂರಕವಾಗಿದೆ ಎಂಬುದು ಸುಳ್ಳಲ್ಲ. ಮುಕ್ತ ಲೈಂಗಿಕತೆಯೆನ್ನುವುದು ಪಾಶ್ಚಾತ್ಯ ದೇಶದಲ್ಲಿ ಮಾತ್ರ ಏಕೆ ಇರಬೇಕು, ನಮ್ಮಲ್ಲಿಯೂ ಎಕೆ ಬರಬಾರದು ಎಂದು ಪ್ರಯೋಗಗಳಿಗೆ ಮುಂದಾಗುವವರಿಗೆ ನಮ್ಮಲ್ಲಿ ಕೊರತೆಯೇನಿಲ್ಲ. ಹಾಗೆ ಪ್ರಯೋಗಗಳಲ್ಲಿ ಭಾಗಿಯಾಗುವವರೆಲ್ಲ ಮದುವೆಯಾಗುತ್ತಾರೆ ಎನ್ನುವ ಭರವಸೆಯಿಲ್ಲ. ಕಾಲೇಜು ದಿನಗಳ ಪೂರ್ಣ ಮೋಜು ಮಾಡಿ, ನಂತರ ಯಾರೋ ಒಬ್ಬರನ್ನು ಮದುವೆಯಾದರೆ ಸಾಕು ಎಂಬ ಮನೋಭಾವ ಇವರದ್ದು. ಕಾಲೇಜು ದಿನಗಳಲ್ಲಿ ಗೆಳೆಯರೆನಿಸಿಕೊಂಡ ಗಂಡು-ಹೆಣ್ಣುಗಳೆಲ್ಲ ಮುಕ್ತ ಲೈಂಗಿಕ ಜೀವನದಲ್ಲಿ ತೊಡಗುತ್ತಾರೆ ಎನ್ನಲು ಬರುವುದಿಲ್ಲ. ಗೆಳೆತನದ ಪಾವಿತ್ರ್ಯವನ್ನು ಮನಗಂಡು, ಗೆಳೆತನದ ಪರಿಧಿಯಲ್ಲಿ ಸ್ನೇಹವನ್ನು ನಿಭಾಯಿಸುವವರು ಸಾಕಷ್ಟಿದ್ದಾರೆ. ಹಾಗೆಯೇ ಕೆಲವರಾದರೂ ದಂಪತಿಗಳಾಗಿ, ತಮ್ಮದೇ ಆದ ಗೂಡನ್ನು ಕಟ್ಟಿ, ಮಕ್ಕಳು ಮರಿಗಳೊಡನೆ ಸುಖ ಜೀವನವನ್ನು ನಡೆಸುತ್ತಿದ್ದಾರೆ. ಇತಹವರು ನಮ್ಮ ದೇಶದಲ್ಲಿ ಇನ್ನೂ ಇರುವುದು ತುಸು ನೆಮ್ಮದಿಯನ್ನು ತರುವ ವಿಷಯ.
            ಪಕ್ವತೆ:
            ಗೆಳೆತನ ಪಾವಿತ್ರ್ಯವಾದದ್ದು. ಇದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಎಲ್ಲ ಗೆಳೆಯರು, ಗೆಳೆತನದ ಪಾವಿತ್ರ್ಯತೆಯನ್ನು ಅರ್ಥಮಾಡಿಕೊಂಡು ನಿಭಾಯಿಸುತ್ತಾರೆ ಎನ್ನಲು ಬರುವುದಿಲ್ಲ. “ಋಣಾನುಬಂಧ ರೂಪೇಣ ಪಶು, ಪತ್ನಿ, ಸುತ, ಆಲಯಎಂಬ ಆರ್ಯೋಕ್ತಿಯಿದೆ. ಇದರ ಜೊತೆಯಲ್ಲಿಮಿತ್ರ’’ ಎನ್ನುವ ಶಬ್ಧವನ್ನೂ ಸೇರಿಸಬೇಕಿದೆ. ನನ್ನ ಗೆಳತಿಯೊಬ್ಬಳು, ಭರ್ತೃಹರಿಯ ನೀತಿಶತಕದ ಪದ್ಯವನ್ನು ಓದಿ, ಇಂತಹ ಗೆಳೆತನ ಅಸಾಧ್ಯ ಎಂಬ ತೀರ್ಮಾನಕ್ಕೆ ಬಂದಿದ್ದಳು. ಆದರೆ ಅಂತಹ ಗೆಳೆತನ ಆಕೆಗೆ ದೊರೆತಾಗಬರಡೆನಿಸಿದ್ದ ಬದುಕಲ್ಲಿ ಮಿಂಚಿದೆ ಹೊಸ ಕಿರಣ; ನಿಷ್ಕಲ್ಮಶ ಸ್ನೇಹವಾಯ್ತು ಅದಕ್ಕೆ ಕಾರಣ; ಎಂದೋ ಬಯಸಿದ್ದೆ ಇಂತದ್ದೇ ಸ್ನೇಹದ ಬಂಧನ; ಎಲ್ಲಿತ್ತೋ ಇಲ್ಲಿಯವರೆಗೆ ಇಂತಹ ಮಧುರ ಸ್ಪಂದನಎಂದು ಕ್ಷಣದಲ್ಲಿ ಕವಯತ್ರಿಯಾಗಿ, ಒಂದು ಕವನವನ್ನೇ ಬರೆದಳು.
            ಇಂದು ಪ್ರಾಮಾಣಿಕ ಗೆಳೆಯರ ಅಗತ್ಯವಿದೆ. ನನ್ನ ಅನಿಸಿಕೆಯಲ್ಲಿ ನಮ್ಮ ಸಂಗಾತಿಗಿಂತ ದೊಡ್ಡ ಗೆಳೆಯ ಅಥವ ಗೆಳತಿ ಮತ್ತೊಬ್ಬರು ಆಗಲು ಕಷ್ಟ. ಅವರು ಮನಸ್ಸನ್ನು ಮಾತ್ರವಲ್ಲ, ದೇಹವನ್ನೂ ಹಂಚಿಕೊಂಡಿರುತ್ತಾರೆ. ಹಾಗಾಗಿಸಖಾ ಸಪ್ತಪದಿ ಭವಎಂಬ ಸಪ್ತಪದಿಯ ಮಂತ್ರವನ್ನು ನಮ್ಮ ಯುವ ಜನತೆ ಅರ್ಥ ಮಾಡಿಕೊಂಡು ತಮ್ಮ ಬದುಕಲ್ಲಿ ಅಳವಡಿಸಿಕೊಂಡರೆ ಅವರ ಬದುಕು ಬಂಗಾರವಾಗುತ್ತದೆ. ಆರೋಗ್ಯಕರ ಸಮಾಜ ನಮ್ಮದಾಗುತ್ತದೆ.

                                                            -------------------------

-          ಕಾವ್ಯ