Monday 30 January 2012


ಪಪ್ಪಾ.. ಐ ಲವ್ ಯು ಫಾರ್ ಎವರ್!
Any man can be a father, but it takes a special person to be a dad


ಗೆಳೆಯರೆ!

ನಮ್ಮ ಬಾಲ್ಯ ಎಷ್ಟು ಸೊಗಸು ನಾವು ಚಿಕ್ಕವರಿದ್ದಾಗ ನಮ್ಮ ಪಾಲಿಗೆ ನಮ್ಮ ಅಪ್ಪ ಹೀರೊ! ಬೆಳೆಯುತ್ತ...ಅಪ್ಪನ ಬಗೆಗಿನ ನಮ್ಮ ಕನಸು ಸ್ವಲ್ಪ ಕರಗಿ ಅವನೂ ಸಹಾ ಎಲ್ಲರ ಹಾಗೆ ಮನುಷ್ಯ, ಅವನೂ ಕೆಲವು ಸಲ ತಪ್ಪು ಮಾಡಬಲ್ಲ ಎಂದು ಅನಿಸುತ್ತದೆ. ಆದರೂ ಅಪ್ಪನ ಜೀವನಾನುಭವ ಹಿರಿದು. ಅಪ್ಪನ ಮನಸ್ಸು, ದೂರಾಲೋಚನೆ ಹಾಗೂ ಕಕ್ಕುಲಾತಿ ನನ್ನನ್ನು ಬೆರಗುಗೊಳಿಸಿದೆ. ಅಪ್ಪನ ಬಗೆಗಿನ ನನ್ನ ಲಹರಿಯನ್ನು ನಿಮ್ಮ ಮುಂದಿಡುತ್ತ್ತಿದ್ದೇನೆ. ಹೇಗಿದೆ?? ಓದಿ ಹೇಳಿ.

ನಾನು ಸದಾ ನಗುತ್ತಿರುವ ಹೂವು ಹುಡುಗಿ. ನನ್ನ ನಗುವು ಸ್ವಲ್ಪವೂ ಮಾಸದಂತೆ ನನ್ನಗೆ ಬೇಕಾದುದನ್ನೆಲ್ಲ, ನಾನು ಕೇಳುವ ಮೊದಲೇ ತಂದುಕೊಡುತ್ತಿದ್ದ ಅಪ್ಪ. ನನಗೇನು ಬೇಕು ಎನ್ನುವುದನ್ನು ನಾನು ಬಾಯಿಬಿಟ್ಟು ಹೇಳುವ ಮೊದಲೇ ತಂದುಕೊಡುವ ಅಪ್ಪನ ಸಾಮರ್ಥ್ಯದ ಬಗ್ಗೆ ಬೆರಗಾಗಿದ್ದೇನೆ. ಆದರೆ.... ಇಂದು ನನ್ನ ಮನಸ್ಸು ಯಾವುದೋ ಸುಳಿಯಲ್ಲಿ ಸಿಕ್ಕಿ ಚಡಪಡಿಸುತ್ತಿದೆ. ನನ್ನ ವೇದನೆಯನ್ನು ಯಾರಲ್ಲೂ ಹೇಳಿ ಕೊಳ್ಳಲು ಆಗದೆ ನಾನು ಒದ್ದಾಡುತ್ತಿದ್ದೇನೆ. ಸುಮ್ಮನೆ ಕುಳಿತು ಜೋರಾಗಿ ಅತ್ತು ಬಿಡಬೇಕೆಂದು ಅನಿಸುತ್ತಿದೆ. ಆದರೂ ಅಪ್ಪ ಸುಮ್ಮನಿದ್ದಾನೆ. ಅವನಿಗೇಕೆ ತಿಳಿಯುತ್ತಿಲ್ಲ ನನ್ನ ಮನಸ್ಸಿನ ತುಮುಲ. ಅಪ್ಪ ಇದ್ದಕ್ಕಿದ್ದ ಹಾಗೆ ನೀನೇಕೆ ಹೀಗಾದೆ………….

ನನ್ನ ಅಸಹಾಯಕ ಸ್ಥಿತಿಯನ್ನು ಕಂಡು ನನಗೆ ಜೋರಾಗಿ ಅಳಬೇಕೆನಿಸುತ್ತಿದೆ. ಆದರೂ ನನ್ನ ಕಣ್ಣಿನಿಂದ ಒಂದು ಹನಿ ನೀರೂ ಬರುತ್ತಿಲ್ಲ. ಚಿಕ್ಕವಳಿರುವಾಗ ನಾನು ಅತ್ತರೆ ಅಪ್ಪನ ಮನಸ್ಸು ಅದೆಷ್ಟು ನೋಯುತಿತ್ತು!. ನನ್ನ ಕಣ್ಣಂಚಿನಲ್ಲಿ ಧುಮುಕಲು ಸಿದ್ಧವಾಗಿರುತ್ತಿದ್ದ ನೀರು, ಅಪ್ಪನ ಬಾಡುತ್ತಿರುವ ಮುಖವನ್ನು ನೋಡಿದ ಕೂಡಲೇ ಅಲ್ಲಿಯೇ ಹಿಂಗಿ ಹೋಗುತ್ತಿತ್ತು. ನಾನು ನನ್ನ ಉನ್ನತ ಶಿಕ್ಷಣಕ್ಕಾಗಿ ದೂರದ ಊರಿಗೆ ಹೊರಟು ನಿಂತಾಗ...ಅಪ್ಪನ ಕಣ್ಣಂಚಲ್ಲಿ ನೀರ ಹನಿ ಕಂಡಿದ್ದೆ. .ಗಂಟಲು ಕಟ್ಟಿತ್ತು. ನನಗೂ ಉಸಿರುಕಟ್ಟಿತು. ಮನಸ್ಸಿನ ಅಣೆಕಟ್ಟೆಯನ್ನು ಒಡೆದು ಕಣ್ಣೀರು ಬೋರ್ಗರೆಯಿತು. “ಛೆ! ನೀನು ಅಪ್ಪನ ಮಗಳಲ್ವಾ..ಹೀಗೆಲ್ಲಾ ಚಿಕ್ಕ ಮಕ್ಕಳ ತರ ಅಳಬಾರದು” ಅಂತಾ ನನಗೆ ಮನಸ್ಸಿಗೆ ಧೈರ್ಯ ತುಂಬಿದರು.

ಅಪ್ಪ ನನ್ನ ಜೀವನದಲ್ಲಿ ಬಂದ ಮೊದಲ ಪುರುಷ... ಅಪ್ಪನನ್ನು ಅಪ್ಪ ಎನ್ನುವುದಕ್ಕಿಂತ ಮಿಗಿಲಾಗಿ ಅವರು ನನ್ನ ಬೆಸ್ಟ್ ಫ್ರೆಂಡ್ ಎಂದು ಕರೆಯುವುದು ಲೇಸು. ಅಮ್ಮ ನನ್ನನ್ನು ಬೈದಾಗೆಲ್ಲಾ ಅಪ್ಪನ ಹತ್ತಿರ ಅದನ್ನು ಹೇಳಿಕೊಂಡು ಅಳುತ್ತಿದ್ದೆ. ಅಕ್ಕನ ಜತೆ ಜಗಳವಾಡಿದಾಗ 'ಹೋಗಲಿ ಬಿಡು ಅವಳು ದೊಡ್ಡವಳು ಅವಳಿಗೆ ನೀನು ಏನೂ ಅನ್ನಬಾರದು' ಅಂತ ಹೇಳುತ್ತಿದ್ದರು. ಪುಟ್ಟ ತಮ್ಮ ಕಿತಾಪತಿ ಮಾಡಿದ್ರೆ 'ಅವನು ಚಿಕ್ಕವನಲ್ವಾ ಕ್ಷಮಿಸಿ ಬಿಡು' ಅಂತಾ ಹೇಳುತ್ತಿದ್ದರು. ಹೀಗೆ ಚಿಕ್ಕಂದಿನ ಕ್ಷಮೆಯ ಪಾಠವನ್ನು ಹೇಳಿಕೊಟ್ಟರು.

ನಿನಗೆ ಯಾರಾದರೂ ಕೆಟ್ಟದ್ದನ್ನು ಮಾಡಿದರೆ ಅವರಿಗೆ ಒಳ್ಳೆಯದನ್ನೇ ಮಾಡು. ಅವರನ್ನು ಪ್ರೀತಿಸು. ಪ್ರೀತಿಯಿಂದ ಯಾರನ್ನು ಬೇಕಾದರೂ ಗೆಲ್ಲಬಹುದು. ದ್ವೇಷದಿಂದ ಏನನ್ನೂ ಗೆಲ್ಲೋಕೆ ಆಗಲ್ಲ, ಏನನ್ನೂ ಸಾಧಿಸೋಕ್ಕೆ ಆಗಲ್ಲ ಎಂದು ಹೇಳುತ್ತಾ ನನ್ನ ಜೀವನದುದ್ದಕ್ಕೂ ಮಾಗ೯ದಶಿ೯ಯಾದರು. ನನ್ನನ್ನು ನೋಡಿದವರೆಲ್ಲ 'ಅಪ್ಪನ ಪಡಿ ಅಚ್ಚು ಈ ಹುಡುಗಿ” ಎಂದು ಹೇಳುತ್ತಿದ್ದರು. ಜೊತೆಗೆ ’ಅಪ್ಪನ ರೂಪವನ್ನು ಮಾತ್ರವಲ್ಲ, ಗುಣವನ್ನೂ ಹೊತ್ತಿದ್ದಾಳೆ. ತನಗೆ ಸರಿ ಅನಿಸಿದ್ದನ್ನು ಪೂರ್ಣ ಮಾಡೋವರೆಗೂ ಬಿಡಲ್ಲ' ಎಂದು ಹೇಳುತ್ತಿದ್ದರು. ಅವರು ಹೇಳಿದ್ದರಲ್ಲಿ ಅತಿಶಯ ಏನಿರಲಿಲ್ಲ, ನನ್ನಪ್ಪ ಅಂದ್ರೆ ನನಗೆ ತುಂಬಾ ಇಷ್ಟ. ಕಾರಣ ಅವರ ಮಿತವಾದ ಮಾತು, ಹಿತವೆನಿಸುವ ನಡೆ, ತಾನು ಬಯಸಿದಂತೆ ಅವರು ಬದುಕುತ್ತಿದ್ದ ರೀತಿ –ಇವು ನನ್ನನ್ನು ಆಕರ್ಷಿಸಿದ್ದವು. ಆದರೆ ಅವರು ತಮ್ಮ ಆದರ್ಶಗಳನ್ನು ಎಂದಿಗೂ ನಮ್ಮ ಮೇಲೆ ಹೊರಿಸಿದ್ದಿಲ್ಲ. ಇದು ಅವರ ದೊಡ್ಡಗಾರಿಕೆ ಎಂದು ಈಗ ನನಗೆ ಅನಿಸುತ್ತಿದೆ.

ಒಂದು ನಿಜವನ್ನು ನಾನು ಹೇಳಬೇಕು. ನನ್ನ ಅಪ್ಪ ನನ್ನನ್ನು ತಮ್ಮ ಸುಭದ್ರ ಬಾಹುಗಳ ನಡುವೆ ಬೆಳೆಸಿದರು. ಸದಾ ಅವರ ಬೆಚ್ಚಗಿನ  ಅಪ್ಪುಗೆಯಲ್ಲಿ ಬೆಳೆದ ನನಗೆ ಹೊರಜಗತ್ತಿನ ಸುಡುಬಿಸಿಲು, ಬಿರುಗಾಳಿ, ಸುರಿಮಳೆ, ಕಡು ಚಳಿಗಳ ಪರಿವೆಯಿರಲಿಲ್ಲ. ಹಾಗಾಗಿ ಈ ಜಗತ್ತು ಬಹಳ ಸುಂದರವೆಂದು ನಾನು ಭಾವಿಸಿದ್ದೆ. ನಾನು ಮನೆಯಿಂದ ಹೊರಬಂದು, ಸ್ವ್ತಂತ್ರವಾಗಿ ಎಲ್ಲರೊಡನೆ ಒಡನಾಡುವಾಗ ಈ ಜಗತ್ತಿನ ಒಂದೊಂದೊಏ ಕ್ರೌರ್ಯಗಳು ಅನಾವರಣಗೊಳ್ಳುತ್ತಾಹೋದವು. ಇಲ್ಲಿಯವರಲ್ಲಿ ಹೆಚ್ಚಿನವರು ಸ್ವಾಥಿ೯ಗಳು. ತಮ್ಮ ಸ್ವಾರ್ಥಸಾಧನೆಗಾಗಿ ಏನನ್ನೂ ಮಾಡಲು ಹೇಸದ ಜನ. ತಾನಾಯಿತು, ಅನ್ಯಾಯವಾಗುತ್ತಿದ್ದರೂ ಅದರ ವಿರುದ್ಧ ಧ್ವನಿಯೆತ್ತಲೂ ಕೂಡಾ ಅಂಜುವ ಅಂಜುಬುರುಕರು ಇವರು. . ಹಣದಾಸೆಗಾಗಿ ಏನು ಬೇಕಾದರು ಮಾಡ ಬಲ್ಲ ಧನದಾಹಿಗಳು. ಇಲ್ಲಿ ಭಾವನೆಗಳಿಗೆ  ಬೆಲೆಯೇ ಇಲ್ಲ. ಪರಸ್ಪರ ಹಗೆ ಸಾಧಿಸುತ್ತಾ, ಗುದ್ದಾಡುತ್ತಾ ನಾನೇ ಮೇಲು ಎಂದು ತೋರಿಸಿಕೊಳ್ಳಲು ಇಲ್ಲಿ ಪೈಪೋಟಿ ನಡೆಯುತ್ತಿದೆ. ಸಾಮಾಜಿಕ ಹೊಣೆಯ ಲವಲೇಶ ಪರಿವೆಯಿಲ್ಲದೆ ತಾನಾಯಿತು ತನ್ನ ಕೆಲಸವಾಯಿತು ಎಂದು ತೆಪ್ಪಗೆ ಕೂರುವವರೇ ಜಾಸ್ತಿ.

ಮನುಷ್ಯ ಬುದ್ದಿ ಜೀವಿ...ಏನು ಬೇಕಾದರೂ ಸಾಧಿಸಬಲ್ಲ ತಾಕತ್ತು ಅವನಲ್ಲಿದೆ. ಚಂದ್ರನ ಮಟ್ಟಿದ. ಮಂಗಳನ ಮುಟ್ಟಿದ. ವೈಜ್ಞಾನಿಕ ಆವಿಷ್ಕಾರಗಳಿಂದ ಜಗತ್ತನ್ನು ಕುಗ್ರಾಮವನ್ನಾಗಿಸಿದ. ಯಂತ್ರಗಳ ನೆರವಿನಿಂದ ದೈಹಿಕ ಶ್ರಮ ಮರೆತ. ಮಹಾ ಸೋಮಾರಿಯಾದ. ಈಗ ಹುಟ್ಟು ಸಾವುಗಳನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಸಂಶೋಧನೆಯಲ್ಲಿ ತೊಡಗಿರುವನು.  ಪರಮಾಣುಗಳನ್ನು ಸ್ಫೋಟಿಸಿ ತನ್ನನ್ನು ಮಾತ್ರವಲ್ಲ, ಇಡೀ ವಸುಂಧರೆಯನ್ನು ಕೊಲ್ಲಲು ಸಿದ್ಧನಾಗಿರುವ. .. ಆದರ ಬದ್ಫ಼ಲು ಅವನು ತನ್ನ ಅಹಂಕಾರವನ್ನು ಅಹಂ ಛಿದ್ರಗೊಳಿಸುವಂತಾಗಿದ್ದರೆ!.

ಫ್ರಾಯ್ಡ್ ಹೇಳಿರುವನಂತೆ. ಈಡಿಪಸ್ ಕಾಂಪ್ಲೆಕ್ಸ್... ಎಲೆಕ್ಟ್ರಾ ಕಾಂಪ್ಲೆಕ್ಸ್ ಇತ್ಯಾದಿ. ಮಗಳು ಎಂದರೆ ತನ್ನ ಹೆಂಡತಿಯ ಪ್ರತಿರೂಪ. ಎಲ್ಲ ಅಪ್ಪಂದಿರು ತಮ್ಮ ಹೆಣ್ಣು ಮಕ್ಕಳನ್ನು ಪ್ರೀತಿಸುವಾಗ ಅವರ ಮನಸ್ಸಿನಲ್ಲಿ ಅವರ ಹೆಂಡತಿ ಇರುತ್ತಾಳೆಯೆ? ಗೊತ್ತಿಲ್ಲ. ಎಲ್ಲ ಅಪ್ಪಂದಿರು ನನ್ನ ಅಪ್ಪನಂತೆಯೇ ತಮ್ಮ ಮಕ್ಕಳನ್ನು ತುಂಬಾ ಪ್ರೀತಿಸುತ್ತಾರೆ ಎಂದು ನಾನು ತಿಳಿದಿದ್ದೆ. ಆದರೆ ನನ್ನ ಕಾಲೇಜು ಜೀವನದಲ್ಲಿ ದೂರ ದೂರ ಸ್ಥಳಗಳಿಂದ ಅನೇಕ ಗೆಳತಿಯರ ನಿಕಟ ಸಂಪರ್ಕ ಬಂದಾಗ, ಎಲ್ಲ ಅಪ್ಪಂದಿರು ನನ್ನ ಅಪ್ಪನಂತಲ್ಲ ಎಂಬ ಸತ್ಯ ಗೊತ್ತಾಯಿತು. ಇದು ನಿಜಕ್ಕೂ ನನಗೆ ದೊಡ್ಡ ಆಘಾತವನ್ನು ಉಂಟು ಮಾಡಿದೆ.

ತಮ್ಮ ಮಗಳನ್ನು ಪ್ರೀತಿಯಿಂದ ಬೆಳೆಸುವ ಅಪ್ಪಂದಿರು, ತಮ್ಮ ಹೆಣ್ಣು ಮಕ್ಕಳ ಕಣ್ಣಲ್ಲಿ ಹೀರೋ ಸ್ಥಾನವನ್ನು ಗಳಿಸಿದ ಅಪ್ಪಂದಿರು, ತಮ್ಮ ಮಗಳು ಹುಡುಗನೋರ್ವನನ್ನು ಪ್ರೀತಿಸುತ್ತಾಳೆ ಎಂದ ಕೂಡಲೆ ’ವಿಲನ್’ಗಳಾಗಿಬಿಡುತ್ತಾರೆ. ಏಕೆ? ನಾನು ಕೆಲವು ಹುಡುಗಿಯರನ್ನು ನೋಡಿದ್ದೇನೆ. ಮನೆ ಬಿಟ್ಟು ಪ್ರಿಯಕರನ ಜತೆ ಓಡಿ ಬಂದ ಅದೆಷ್ಟೋ ಹೆಣ್ಮಕ್ಕಳನ್ನು ನಾನಿಲ್ಲಿ ನೋಡಿದ್ದೇನೆ. ಅಂದೊಂದು ದಿನ ಒಬ್ಬಳು ಹುಡುಗಿ ತನ್ನ ಪ್ರೇಮಕ್ಕೆ 'ಅಪ್ಪ' ಅಡ್ಡಿಯಾಗುತ್ತಾನೆ ಎಂಬ ಭಯದಿಂದಲೇ ಮನೆಯನ್ನು ಬಿಟ್ಟು ಬಂದಿದ್ದೇನೆ ಎಂದು ಹೇಳಿದಳು. ನೀವೇ ಹೇಳಿ ..ಮಗಳು ಚೆನ್ನಾಗಿರಬೇಕೆಂದು ತಾನೆ ಎಲ್ಲಾ ಅಪ್ಪಂದಿರ ಆಸೆ. ಆದರೂ ಅವರು ಹೀಗೇಕೆ ಆಡುತ್ತಾರೆ?

ಅಪ್ಪಂದಿರು ಒಂದು ಕಾಲದಲ್ಲಿ ಹುಡುಗರೇ ಆಗಿದ್ದವರು. ಹಾಗಾಗಿ ಅವರಿಗೆ ಹುಡುಗರ ಸ್ವಭಾವ ಚೆನ್ನಾಗಿ ಗೊತ್ತು. ಪ್ರೀತಿಸುವ ಎಲ್ಲ ಹುಡುಗರು ಮದುವೆಯಾಗುವುದಿಲ್ಲ ಎನ್ನುವ ಸತ್ಯ ಅವರಿಗೆ ತಿಳಿದಿರುತ್ತದೆ. ತನ್ನ ಮಗಳು ’ಎಳಸು ಪ್ರೇಮ’ (ಕಾಫ್ ಲವ್) ಬಲಿಯಾಗಿ, ಯಾವುದೇ ಗೊತ್ತು ಗುರಿಯಿಲ್ಲದೆ ಪ್ರೇಮಪಾಶಕ್ಕೆ ಸಿಲುಕಿ ತನ್ನ ಜೀವನವನ್ನು ಹಾಳು ಮಾಡಿಕೊಳ್ಳುವುದು ಬೇಡ ಎಂಬ ಭಾವ ಅವನ ಮನಸ್ಸಿನಲ್ಲಿರಬಹುದು. ಅದಕ್ಕಾಗಿ ಅಪ್ಪ ಗದರಿಸಬಹುದು. ಬೈಯಬಹುದು. ಒಂದೆರಡು ಏಟು ಹಾಕಬಹುದು. ಅಷ್ಟು ಮಾತ್ರಕ್ಕೆ ಅಪ್ಪನಿಗೆ 'ವಿಲನ್' ಪಟ್ಟ ಕಟ್ಟುವುದು ಸರಿಯಲ್ಲ ಎಂದು ನನಗೆ ಅನಿಸುತ್ತದೆ. ಹುಡುಗರೆಲ್ಲ ಕೆಟ್ಟವರಲ್ಲ. ತಾನು ಮೆಚ್ಚಿರುವ ಹುಡುಗ ಕೆಟ್ಟವನಲ್ಲ, ಮದುವೆಯಾಗದೇ ಕೈ ಬಿಟ್ಟು ಹೋಗುವುದಿಲ್ಲ, ದಾಂಪತ್ಯ ಗಾಂಭೀರ್ಯವನ್ನು ನಾವು ಅರಿತಿದ್ದೇವೆ ಎನ್ನುವುದನ್ನು ಹುಡುಗಿಯು ತನ್ನ ಅಪ್ಪನಿಗೆ ಮನದಟ್ಟು ಮಾಡಿಕೊಡಬೇಕು. ಒಂದು ವೇಳೆ ಪ್ರೀತಿಸಿದವ ಕೈಕೊಟ್ಟ ಅಂದ್ಕೊಳ್ಳಿ...ಮಗಳು ಮತ್ತೆ ತವರು ಮನೆಗೆ ಬರುತ್ತಾಳೆ. ಮಗಳು ಕೈಕೊಟ್ಟವನ ಪತ್ನಿಯಾಗಿ ಉಳಿಯುವುದಿಲ್ಲ..ಆದರೆ ಮಗಳು ಸಾಯುವವರಿಗೂ  ಅಪ್ಪನ ಮಗಳಾಗಿರುತ್ತಾಳೆ. ಅಪ್ಪನ ಕೈಯಲ್ಲಿ ಆಕೆಯ ಜೀವನ ಮತ್ತೆ ಅರಳುತ್ತದೆ. ನಾವು ಹುಡ್ಗೀರು ಇದನ್ನೆಲ್ಲಾ ಯಾಕೆ ಯೋಚಿಸುವುದಿಲ್ಲ?


ನನ್ನ ಬೆಳೆಸಿದ ರೀತಿಯಲ್ಲಿ ಅಪ್ಪನಿಗೆ ಅಚಲವಾದ ವಿಶ್ವಾಸ. ಅವರ ಜೀವನ ಶೈಲಿ ತುಂಬಾ ಸರಳ, ಅಪ್ಪಾ ಹೊಸ ಬಟ್ಟೆ ತಗೋ ಇದು ಹಳೆಯದಾಯ್ತು ಅಂದ್ರೆ ನಮ್ಮ ವ್ಯಕ್ತಿತ್ವದಿಂದ ಗೌರವ ಸಿಗಬೇಕೇ ಹೊರತು ಬಟ್ಟೆ, ಅಲಂಕಾರಗಳಿಂದಲ್ಲ.’ ಎನ್ನುವ ಉತ್ತರ.!! ಅಪ್ಪ ವಿದೇಶಿ ಸಂಪ್ರದಾಯ, ರೀತಿ ನೀತಿಗಳನ್ನು ಎಂದಿಗೂ ಒಪ್ಪುವುದಿಲ್ಲ. ಸತ್ಯ, ಪ್ರಾಮಾಣಿಕತೆ ಬದುಕಿನ ಆಧಾರಸ್ತಂಭಗಳು ಎಂದು ನಂಬಿರುವವರು...ಅಪ್ಪನ ಬಗ್ಗೆ ಎಷ್ಟು ಹೇಳಿದರೂ ಸಾಲದು.

ಹರೆಯದಲ್ಲಿ ಕೆಲವು ಬಾರಿ ಅಪ್ಪನ ವಿಚಾರಧಾರೆ ಸರಿಯಾಗಿ ಅರ್ಥವಾಗದೆ ಅಲ್ಲೋ ಇಲ್ಲೋ ಒಮ್ಮೆ ದಾರಿ ಬದಲಿಸಲೇ ಎಂದು ಬುದ್ದಿ ಮನಸನ್ನು ಕೇಳಿದ್ದಿದೆ. ಆದರೆ ಮನಸು ಮಾತ್ರ ಅಪ್ಪನ ದಾರಿಯನ್ನು ಬಿಡಲು ಒಪ್ಪಲೇ ಇಲ್ಲ...ಮನಸಿನ ಮಾತನ್ನು ಕೇಳುವವಳು ನಾನು ಅದಕ್ಕೆ ಅಪ್ಪನ ದಾರಿಯಲ್ಲೇ ನಡೆದೆ. ಕಳೆದುಹೋದವರ ಬಗ್ಗೆ ಬೇಜಾರಿದೆ, ಆದರೆ ಜೋತೆಯಿರುವವರೆಲ್ಲಾ ಎಂದಿಗೂ ಕೈ ಬಿಡದವರು. ಇದೆಲ್ಲಾ ಅಪ್ಪನ ಆದರ್ಶಗಳನ್ನು ನಾ ಇಷ್ಟಪಟ್ಟು ಮೈಗೂಡಿಸಿಕೊಂಡಿದ್ದು...ಅದರಲ್ಲೂ ನನ್ನ ಸ್ವಂತಿಕೆ ಇರುವಂತೆ ನನ್ನ ಬದುಕನ್ನು ರೂಪಿಸಿಕೊಳ್ಳುವ ಅವಕಾಶ ಕೊಟ್ಟಿದ್ದು ಈ ನನ್ನ ಪ್ರೀತಿಯ ಅಪ್ಪ..


ಜೀವನದ ಗತಿ ಯಾವ ರೀತಿ ಯಾವ ದಿಶೆಯಲ್ಲಿ ಸಾಗುತ್ತದೆ ಅಂತಾ ಯಾರಿಗೂ ಗೊತ್ತಿರಲ್ಲ. ಆದರೆ ನಮ್ಮ ಮನಸ್ಸು ನಮ್ಮ ಕೈಯಲ್ಲಿರಬೇಕು ಎಂದು ಹೇಳಿದ ಅಪ್ಪನ ಮಾತು ನಿಜ. ಜೀವನದಲ್ಲಿ ಕಷ್ಟ ಬಂದಾಗಲೇ ಜೀವನ ಏನು ಎಂಬುದು ಅಥ೯ವಾಗುವುದು. ಒಂಟಿತನ ನಮ್ಮನ್ನು ನಾವೇ ಅರಿಯುವಂತೆ ಮಾಡುತ್ತದೆ. ಹೀಗಿರುವಾಗ ಜೀವನವನ್ನು ಹೇಗೆ ನಿಭಾಯಿಸಿ ಮುನ್ನಡೆಸಬೇಕೆಂಬುದನ್ನು ಅಪ್ಪ ಹೇಳಿಕೊಟ್ಟಿದ್ದರು. ಈ ಜಗತ್ತಿನ ಜಂಜಾಟಗಳನ್ನೆಲ್ಲಾ ನೋಡುವಾಗ ಬದುಕಲ್ಲಿ ನೊಂದವರಿಗಾಗಿ ನನ್ನಿಂದ ಏನೂ ಮಾಡಲು ಸಾಧ್ಯವಾಗುತ್ತಿಲ್ಲವಲ್ಲಾ ಎಂಬ ಕೊರಗು ಮಾತ್ರ ಮನಸ್ಸನ್ನು ಕಾಡುತ್ತಿರುತ್ತದೆ.
ಕೆಲವೊಮ್ಮೆ ಸೋತು ಕಣ್ಣೀರಿಡುವಾಗ ಅಪ್ಪನ ಮಾತು, ನಗು, ಧೈರ್ಯ,ಅವರ ಆದರ್ಶ ತತ್ವ ಎಲ್ಲವೂ ಕಣ್ಮುಂದೆ ಸುಳಿಯುತ್ತದೆ. ಸೋತ ಕೈಗಳು ಮತ್ತೆ ಲೇಖನಿ ಹಿಡಿದು ಭಾವನೆಗಳೇ ಅಕ್ಷರಗಳಾಗುತ್ತವೆ. ಆಫ್ಟರ್ ಆಲ್ ನಾನು ಅಪ್ಪನ ಮಗಳಲ್ವಾ...ಕಣ್ಣೀರು ಹಾಕುತ್ತಾ ಸುಮ್ನೇ ಕೂರುವಳಲ್ಲ...

ಪಪ್ಪಾ… ಐ ಲವ್ ಯು ಫಾರ್ ಎವರ್!







3 comments: